ಬ್ಯಾಂಕುಗಳ ತವರೂರು, ರಾಷ್ಟ್ರಕ್ಕೆ 5 ಬ್ಯಾಂಕುಗಳನ್ನು ನೀಡಿದ ಹೆಮ್ಮೆಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರು ನಗರಕ್ಕೆ ಬಂದು ನೆಲೆಸಿದ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಭವವಿರುವ ಪರಿಣಿತರು ಹಾಗೂ ಸಮಾನ ಮನಸ್ಕರಿರುವ ಒಂದು ತಂಡ ಒಂದೆಡೆ ಸೇರಿ, ಆರ್ಥಿಕ ಸೌಲಭ್ಯಗಳಿಂದ ವಂಚಿತರಾದ ಸಮಾಜದ ಕೆಳ ಮತ್ತು ಮಧ್ಯಮ ಸ್ತರದ ಕಾರ್ಮಿಕರಿಗೆ, ವೃತ್ತಿಪರರಿಗೆ, ಕೈಗಾರಿಕೋದ್ಯಮಿಗಳಿಗೆ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಹಾಗೂ ಮಹಿಳೆಯರಿಗಾಗಿ ಉದಯವಾದ ಸಹಕಾರಿ ಸಂಸ್ಥೆಯೇ " ಶ್ರೀ ಕಾಳಿಕಾಂಬಾ ಸೌಹಾದ೯ ಸಹಕಾರಿ ನಿಯಮಿತ ". " ಸಹಕಾರಿ ನಿಮ್ಮದು ಸೇವೆ ನಮ್ಮದು" ಎಂಬ ಧ್ಯೇಯ ವಾಕ್ಯದಿಂದ 2002 ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ಇಂದು 3,400 ಸದಸ್ಯರು, 1.00 ಕೋಟಿ ಷೇರು ಬಂಡವಾಳ 10.00 ಕೋಟಿಗಳಷ್ಟು ಠೇವಣಿಗಳನ್ನು ಹೊಂದಿದೆ.
ಸಹಕಾರಿಯು ಸತತವಾಗಿ 19 ವರ್ಷಗಳಿಂದ ಲಾಭವನ್ನು ಗಳಿಸುತ್ತಾ ಬಂದಿದ್ದು, 2003-04 ರಲ್ಲಿ ಶೇಕಡಾ 5.00 ರಿಂದ ಪ್ರಾರಂಭವಾದ ಲಾಭಾಂಶ (Dividend) ಪ್ರತೀ ವರ್ಷವೂ ಹೆಚ್ಚುತ್ತಾ ಹೋಗಿ ಕಳೆದ 2020-21 ನೇ ಸಾಲಿನಲ್ಲಿ ಶೇಕಡಾ 13.00 ರಷ್ಟು ಲಾಭಾಂಶವನ್ನು ಸದಸ್ಯರಿಗೆ ನೀಡಿದೆ. ಇದರ ಜೊತೆಗೆ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ಶೇಕಡಾ 85 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸದಸ್ಯರ ಮಕ್ಕಳಿಗೆ ಪ್ರಾರಂಭದ ವರ್ಷದಿಂದಲೂ ಪ್ರತಿಭಾ ಪುರಸ್ಕಾರದ ಅಡಿಯಲ್ಲಿ ಸನ್ಮಾನಿಸುತ್ತಾ ಬಂದಿರುತ್ತೇವೆ. ಸಹಕಾರಿಯ ಈ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರು ನೀಡಿದ ಸಹಕಾರ, ಹಿತೈಷಿಗಳ ಒಲವು, ನಿರ್ದೇಶಕರಿಗೆ ಸಹಕಾರಿಯ ಮೇಲೆ ಇರುವ ಪ್ರೀತಿ, ಕಾಳಜಿ ಮತ್ತು ತ್ಯಾಗ, ಮುಖ್ಯ ಕಾರ್ಯ ನಿರ್ವಾಹಕರೂ ಸೇರಿದಂತೆ ಸಿಬ್ಬಂದಿ ವರ್ಗದವರ ನಿಷ್ಠೆ, ಪ್ರಾಮಾಣಿಕತೆಗಳೇ ಒಂದು ರೀತಿಯ ಬಂಡವಾಳ ಎಂದರೆ ತಪ್ಪಾಗಲಾರದು.
ಸಮಾಜದಲ್ಲಿನ ಮಧ್ಯಮ ವರ್ಗ ಮತ್ತು ಕೆಳವರ್ಗದ ಜನ ಸಮುದಾಯಕ್ಕೆ ಈ ಬ್ಯಾಂಕುಗಳ ಸವಲತ್ತುಗಳು ಹೆಚ್ಚಿನ ರೀತಿಯಲ್ಲಿ ದೊರಕದೇ ಹೋದಾಗ ಜನ ಸುಮುದಾಯವು ಪರಸ್ಪರ ಸಹಕಾರಿಯ ತತ್ವಗಳನ್ನು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಅಳವಡಿಸಿಕೊಳ್ಳಲಾರಂಭಿಸಿದರು. ಸಹಕಾರೀ ತತ್ವವು ಭಾರತೀಯ ಸಂಸ್ಕೃತಿಗೇನೂ ಹೊಸದಲ್ಲ. ವೇದ ಹಾಗೂ ಉಪನಿಷತ್ ಗಳಲ್ಲೂ ಕೂಡಾ ಸಹಕಾರಿಯ ಉಲ್ಲೇಖವಿದೆ. ಭಾರತದ ಮೊದಲನೇ ಸಹಕಾರ ಕಾಯ್ದೆ 25.03.1904 ರಲ್ಲಿ ಆಸ್ತಿತ್ವಕ್ಕೆ ಬಂತು. ಕರ್ನಾಟಕ ರಾಜ್ಯ ಸಹಕಾರಿ ಸಂಸ್ಥೆಯ ಅಧಿನಿಯಮ ಪ್ರಥಮ ಬಾರಿ 1959 ರಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬಂತು. ಸಹಕಾರಿ ಸಂಸ್ಥೆಗಳ ಮೇಲೆ ಇಲಾಖೆಗಳ ಹಸ್ತಕ್ಷೇಪ ನಿವಾರಣೆ ಮಾಡುವ ಉದ್ದೇಶದಿಂದ ಈ ಅಧಿನಿಯಮವು ಸ್ವಲ್ಪ ಬದಲಾವಣೆಗೊಂಡು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 ರಲ್ಲಿ ಪ್ರಾರಂಭವಾಯಿತು. ಸಹಕಾರಿ ಸಂಸ್ಥೆಗಳ ಮೂಲ ಉದ್ದೇಶ ಸದಸ್ಯರ ಸಾಮಾಜಿಕ ಆರ್ಥಿಕ, ಹಾಗೂ ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸುವುದು. ಈ ನಿಟ್ಟಿನಲ್ಲಿ ಕಾರ್ಯ ತತ್ಪರರಾದ ನಾವು 19 ವರ್ಷಗಳ ಸುದೀರ್ಘ ಅವಧಿಯಲ್ಲಿ ಸದಸ್ಯರಿಗೆ ಸೇವೆಯನ್ನು ನೀಡುತ್ತಾ ಬಂದಿರುತ್ತೇವೆ. 14 ವರ್ಷಗಳಿಂದ ಬಾಡಿಗೆಯ ಕಟ್ಟಡದಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದು 5 ವರ್ಷಗಳಿಂದ ನಮ್ಮದೇ ಆದ ಸ್ವಂತ ಕಟ್ಟಡವನ್ನು ಹೊಂದಿದ್ದೇವೆ. ಸ್ವಂತ ಕಟ್ಟಡವನ್ನು ಹೊಂದಿದ ಹೆಮ್ಮೆ ನಮಗಿದೆ. ಈ ವರ್ತಮಾನ ಕಾಲದಲ್ಲಿ ಸಂಸ್ಥೆಯನ್ನು ನಡೆಸುವುದು ಬಹು ದೊಡ್ಡ ಸವಾಲು. ಸಹಕಾರಿಯ ಉದ್ದೇಶ ಬರೇ ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರೋಗ್ಯ ರಕ್ಷಣೆ ಮುಂತಾದ ಸವಲತ್ತುಗಳನ್ನು ನೀಡುವ ಯೋಜನೆ ನಮ್ಮ ಮನಸ್ಸಿನಲ್ಲಿದೆ. ಸದಸ್ಯರ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಮಹಿಳಾ ಸದಸ್ಯರಿಗೆ ಸಾಂಸ್ಕೃತಿಕ ಸ್ಪರ್ಧೆ, ಹಾಗೂ ಸದಸ್ಯರಿಗೆ ಮತ್ತು ಕುಟುಂಬದವರಿಗೆ ಆರೋಗ್ಯ ಶಿಬಿರಗಳನ್ನು ನಡೆಸುವ ಯೋಜನೆ ಕೂಡಾ ನಮ್ಮ ಕಾರ್ಯಸೂಚಿಯಲ್ಲಿದೆ. ಮುಖ್ಯವಾಗಿ ಈ ಯೋಜನಗಳಿಗೆಲ್ಲ ನಿಮ್ಮ ಸಹಕಾರ ಬಹಳ ಅಗತ್ಯವಿದೆ. ನಮ್ಮ ಪೂರ್ವಜರು “ ಹಾಸಿಗೆಯಿದ್ದಷ್ಟು ಮಾತ್ರ ಕಾಲು ಚಾಚು” ಎಂದು ಹೇಳಿದ್ದಾರೆ. ಅದನ್ನು ಈ ಸಂದರ್ಭದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಅಗತ್ಯವಿದ್ದಷ್ಟು ಮಾತ್ರ ಸಾಲ ಮಾಡಿ, ಒಳ್ಳೆಯ ಉದ್ದೇಶಕ್ಕೆ ಮಾತ್ರ ಸಾಲ ಮಾಡಿ. ಮಾಡಿದ ಸಾಲವನ್ನು ಕ್ರಮಬದ್ಧವಾಗಿ ಮರುಪಾವತಿ ಮಾಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬ ಸದಸ್ಯರು ಈ ನೀತಿಯನ್ನು ಪಾಲಿಸಿದರೆ ಮಾತ್ರ ಸಹಕಾರಿಯು ಪ್ರಗತಿಯನ್ನು ಹೊಂದಲು ಸಾಧ್ಯ.